ಟ್ವೀಡ್
ಒರಟಾದ, ಹೆಚ್ಚು ತೂಕದ ಗಡಸು ಮೇಲ್ಮೈಯುಳ್ಳ, ಅಭಿರುಚಿಯ ಬಣ್ಣಗಳಲ್ಲಿರುವ, ಟ್ವಿಲ್ ನೇಯ್ಗೆಯ ಉಣ್ಣೆ ವಸ್ತ್ರ. ಇದನ್ನು ಮೂಲತಃ ದಕ್ಷಿಣ ಸ್ಕಾಟ್ಲೆಂಡಿನ ವಿಶಿಷ್ಟ ಉಣ್ಣೆಯಿಂದ ತಯಾರಿಸುತ್ತಿದ್ದರು. ಪುರುಷರ ಸೂಟು ಮತ್ತು ಬಾಹ್ಯ ಉಡುಪುಗಳಿಗೆ ಇದರ ಉಪಯೋಗವಿತ್ತು. ಹಾವಿಕ್ಕನ ಸಂಸ್ಥೆಯೊಂದರ ಸಾಗಣೆ ರಶೀತಿಯಲ್ಲಿ ಟ್ವೀಲ್ ಎಂಬ ಪದವನ್ನು ಕೈಬರಹದ ತಪ್ಪಿನಿಂದ ಟ್ವೀಡ್ ಎಂದು ಬರೆದುದರಿಂದ ಈ ಹೆಸರೇ ಪ್ರಚಾರಕ್ಕೆ ಬಂದಿತು. ಇಂದು ಟ್ವೀಡ್ ಪದ ವಿವಿಧ ತೂಕ ಹಾಗೂ ಗುಣಮಟ್ಟಗಳ ವೈವಿಧ್ಯಮಯ ನೇಯ್ಗೆ ಹಾಗೂ ಬಣ್ಣ ಮಿಳಿತ ನೇಯ್ಗೆ ಪರಿಣಾಮಗಳುಳ್ಳ ವಿಶಾಲ ಹರವಿನ ಉಣ್ಣೆ ವಸ್ತ್ರಗಳನ್ನು ನಿರ್ದೇಶಿಸುತ್ತದೆ. ಇವನ್ನು ಪೋಷಾಕು, ಸೂಟಿಂಗ್ ಮತ್ತು ಮೇಲಂಗಿ ಉಡುಪುಗಳಿಗಾಗಿ ಉಪಯೋಗಿಸುತ್ತಾರೆ. ಚೆವಿಯಟ್ ಮತ್ತು ಕಸಿಮಿಶ್ರ ಬಗೆಯ ಉಣ್ಣೆಗಳಿಂದ ನೂತ ದಪ್ಪ ಹಾಗೂ ಒರಟಾದ ಉಣ್ಣೆ ದಾರಗಳಿಂದ ತಯಾರಾದ ಚೆವಿಯಟ್ ವಸ್ತ್ರಗಳು, ಸ್ಯಾಕ್ಸೊನಿ ಅಥವಾ ಮೆರಿನೊ ಗುಣಮಟ್ಟದ ಉಣ್ಣೆಯಿಂದ ತಯಾರಿಸಿ, ಸ್ವಂತವಾಗಿ ಸಂಸ್ಕರಿಸಿರುವ ಅಥವಾ ಅಂಥ ಉಡುಪಿನ ಮೇಲ್ಮೈಯುಳ್ಳ ಸ್ಯಾಕ್ಸೊನಿ ವಸ್ತ್ರಗಳು ಮೊದಲಾದ ಅನೇಕ ಬಗೆಗಳನ್ನು ಟ್ವೀಡ್ ಒಳಗೊಳ್ಳುತ್ತದೆ. ಹೆಚ್ಚು ತೂಕವುಳ್ಳ ಟ್ವೀಡ್ ವಸ್ತ್ರಕ್ಕೆ ನಿದರ್ಶನವೆಂದರೆ ಸಾದಾ ನೇಯ್ಗೆಯಿಂದ ತಯಾರಾದ ಮುಳ್ಳಿಗೂ ಹರಿಯದ ವಿಶೇಷ ಟ್ವೀಡ್. ಇದರ ವಿಶಿಷ್ಟ ಲಕ್ಷಣವೆಂದರೆ, ಯಾಂತ್ರಿಕವಾಗಿ ಕರಾಬು ಆಗುವುದರ ವಿರುದ್ಧ ಹೊಂದಿರುವ ರೋಧ ಸಾಮಥ್ರ್ಯ. ಇದು ಎಷ್ಟರಮಟ್ಟಿಗೆ ಇದೆ ಎಂದರೆ ಈ ವಸ್ತ್ರದ ಮೂಲಕ ಒಂದು ಪೆನ್ಸಿಲನ್ನು ತೂರಿಸಿ ಹೊರಗೆ ತೆಗೆದರೆ, ದಾರಗಳು ಮತ್ತೆ ಮೊದಲಿನ ಸ್ಥಾನಗಳಿಗೆ ಜಿಗಿಯುತ್ತವೆ. ಸ್ಯಾಕ್ಸೊನ ವಿಧದ ಲಘು ಹಾಗೂ ಮಧ್ಯ ತೂಕದ ಟ್ವೀಡ್ ಸೂಟಿಂಗುಗಳನ್ನು 2/2 ಟ್ವಿಲ್ ನೇಯ್ಗೆಯಿಂದ ಸಿದ್ಧಗೊಳಿಸುತ್ತಾರೆ. ಇತ್ತೀಚೆಗೆ ಟ್ವೀಡನ್ನು ಅಣುಕು-ತಿರುಚು ಹತ್ತಿ ನೂಲುಗಳಿಂದಲೂ ತಯಾರಿಸತೊಡಗಿದ್ದಾರೆ. ಇದನ್ನು ಕ್ರೀಡಾ ಉಡುಗೆಗಳಿಗೆ ಬಳಸುವರು.					(ಡಿ.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ